ಪೈಠಣ -
ಮಹಾರಾಷ್ಟ್ರ ರಾಜ್ಯದಲ್ಲಿನ ಒಂದು ಪ್ರಸಿದ್ಧ ಪ್ರಾಚೀನ ತೀರ್ಥಕ್ಷೇತ್ರ ಹಾಗೂ ಐತಿಹಾಸಿಕ ಸ್ಥಳ.  ಔರಂಗಾಬಾದ್ ಜಿಲ್ಲೆಯಲ್ಲಿ ಗೋದಾವರಿ ನದಿಯ ದಡದಲ್ಲಿದೆ ; ಅದೇ ಹೆಸರಿನ ತಾಲ್ಲೂಕಿನ ಮುಖ್ಯ ಸ್ಥಳ.  ಔರಂಗಾಬಾದಿನಿಂದ ಸುಮಾರು 51-52 ಕಿ.ಮೀ. ಇದರ ಪ್ರಾಚೀನ ಹೆಸರು ಪ್ರತಿಷ್ಠಾನ.  ಪತಿಷ್ಠಾನ, ಪಯಿಟಾóನ, ಪೈಥಾನ್, ಬೈಥಾನ್, ಎಂಬ ಹೆಸರುಗಳೂ ಉಂಟು.  ಪೆರಿಪ್ಲಸ್ ಗ್ರಂಥದಲ್ಲಿ ಪೈಠಣ ಮತ್ತು ತಗರ (ತೇರ, ಥೈರ-ಉಸ್ಮಾನಾಬಾದ್ ಜಿಲ್ಲೆ) ನಗರಗಳು ವ್ಯಾಪಾರ ಕೇಂದ್ರಗಳಾಗಿದ್ದವೆಂದು ಹೇಳಿದೆ.  ಪೈಠಣದಿಂದ ಗೋಮೇಧಿಕ ರತ್ನ ವ್ಯಾಪಾರದ ನಿರ್ಯಾತ ವಿಶೇಷವಾಗಿತ್ತು.  ಇಲ್ಲಿ ನಾನಾ ಪ್ರಕಾರದ ಬಟ್ಟೆಗಳು ನೇಯಲ್ಪಟ್ಟು ಮಾರಾಟಕ್ಕೆ ಹೋಗುತ್ತಿದ್ದವು.  ಜರೀಬೂಟಿ ಕೆಲಸಕ್ಕೆ ಪೈಠಣ ಬಹಳ ಪ್ರಸಿದ್ಧ.  ಇಂದಿಗೂ ಆ ಪ್ರಸಿದ್ಧಿ ಇದೆ.  ಪೈಠಣಿ ಸೀರೆ ಮಹಾರಾಷ್ಟ್ರದ ವಧುವಿನ ನಚ್ಚಿನ ಆಯ್ಕೆಗಳಲ್ಲೊಂದು.  
ಅಶೋಕನ ಶಾಸನಗಳಲ್ಲಿ ಪೈಠಣದ ನಾಗರಿಕರ ಉಲ್ಲೇಖವಿದೆ (ಸಾಂಚೀಸ್ತೂಪ).  ಮೌರ್ಯರ ತರುವಾಯ ಅಸ್ತಿತ್ವಕ್ಕೆ ಬಂದ ಸಾತವಾಹನರ ಕಾಲದಲ್ಲಿ ಈ ನಗರ ಅವರ ರಾಜಧಾನಿಯಾಗಿದ್ದು ಬಹಳ ವಿಕಾಸ ಹೊಂದಿತು.  ಪ್ರದ್ಯೋತನ ಸೂರಿಯ (ಕ್ರಿ.ಶ.ಸು. 700) ಕುವಲಯ ಮಾಲಾಗ್ರಂಥದಲ್ಲಿ ಇದು ಕನ್ನಡ ಭಾಷೆಯ ಕೇಂದ್ರವಾಗಿತ್ತೆಂದು ಹೇಳಿದೆ.  ಕಲ್ಯಾಣ ಚಾಳುಕ್ಯರಿಗೆ ರಾಜಧಾನಿಯಾಗುವುದಕ್ಕಿಂತ ಮುಂಚೆ, ಸ್ವಲ್ಪ ಕಾಲ ಇದೇ ಅವರ ರಾಜಧಾನಿಯಾಗಿತ್ತೆಂದು ಒಂದನೆಯ ಸೋಮೇಶ್ವರನ ಕೊಲ್ಲಿಪಾಕಿಯ ಶಾಸನದಿಂದ ತಿಳಿದುಬರುತ್ತದೆ.

ಒಮ್ಮೆ ಪೈಠಣ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದದಲ್ಲದೆ ಸಂಸ್ಕøತ ವಿದ್ಯೆಯ ಮಹಾಪೀಠವೆಂದು ಪ್ರಖ್ಯಾತಿ ಪಡೆದಿತ್ತು.  ವ್ಯಾಕರಣ ಹಾಗೂ ಧರ್ಮಶಾಸ್ತ್ರಗಳ ಅಧ್ಯಯನ ಅಧ್ಯಾಪನಗಳ ಸಂಬಂಧದಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿತ್ತು.  ಸಾತವಾಹನರಿಂದ ಪ್ರಾಕೃತ ಭಾಷೆಗೆ ರಾಜಾಶ್ರಯವನ್ನು ಗುಣಾಢ್ಯ ಇಲ್ಲಿಯೆ ಒದಗಿಸಿಕೊಟ್ಟನೆಂದು ತಿಳಿದುಬರುತ್ತದೆ.  ನಿರ್ಣಯ ಸಿಂಧು ಗ್ರಂಥದ ಕರ್ತೃ ಕಮಲಾಕರ ಭಟ್ಟ.  ಸಿದ್ಧಾಂತ ಕೌಮುದಿ ಗ್ರಂಥದ ಕರ್ತೃ ಭಟ್ಟೋಜೀ ದೀಕ್ಷಿತ ಮೊದಲಾದವರು ಈ ಊರಿನವರು.

ಮಹಾನುಭಾವ ಪಂಥದ ಪ್ರವರ್ತಕ ಚಕ್ರಧರನಿಗೆ ಪೈಠಣ ಕೆಲಕಾಲ ಪ್ರಚಾರ ಕೇಂದ್ರವಾಗಿತ್ತು.  ಇಲ್ಲಿದ್ದ ಭೋಗನಾರಾಯಣ ದೇವಸ್ಥಾನದಲ್ಲಿಯೇ ಆತ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದನೆಂದು ತಿಳಿದುಬಂದಿದೆ.  ಅಂತೆಯೇ ಅವನನ್ನು ಪ್ರತಿಷ್ಠಾನದ ಚಾಂಗದೇವರಾಊಳ ಎಂದು ಹೇಳುವುದುಂಟು.  ಈಗ ದತ್ತಾತ್ರೇಯ ಮಂದಿರ ಎನಿಸಿರುವ ಆ ದೇವಾಲಯ ಇಂದು ಹಾಳು ಬಿದ್ದಿದೆ.  

ನಾಥ ಪಂಥಕ್ಕೂ ಪೈಠಣಕ್ಕೂ ಒಂದು ಬಗೆಯ ವಿಶೇಷ ಸಂಬಂಧವಿದ್ದುದೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧ.  ಜ್ಞಾನೇಶ್ವರ ಪೈಠಣಕ್ಕೆ ಬಂದು ಅಲ್ಲಿದ್ದ ಶಾಸ್ತ್ರಿಗಳನ್ನೂ ಪಂಡಿತರನ್ನು ತಮಗೆ ಉಪನಯನದ ಅಧಿಕಾರ ಕೊಡಬೇಕೆಂದು ಪ್ರಾರ್ಥಿಸಿಕೊಂಡ.  ಆದರೆ, ಅವರು ಸಂನ್ಯಾಸಿಯ ಮಗನಾದ ಅವನಿಗೆ ಉಪನಯನದ ಅಧಿಕಾರವಿಲ್ಲವೆಂದು ನಿರಾಕರಿಸಿದರು.  ಆಗ ಆತ ಒಂದು ಪವಾಡ ಮೆರೆದು ಆ ಪಂಡಿತರುಗಳಿಂದ ಉಪನಯನಕ್ಕೆ ಅನುಮತಿ ಪಡೆದನೆಂದು ವದಂತಿ.  ಈ ಸ್ಥಳವೇ ಪೈಠಣದ ಪ್ರಸಿದ್ಧ ನಾಘಘಾಟ್.  ಕ್ರಿ.ಶ. 16 ನೆಯ ಶತಮಾನದಲ್ಲಿ ಇದ್ದ ಸಂತ ಏಕನಾಥ ಮಹಾರಾಜನಿಗೆ ಪೈಠಣ ಜನ್ಮಭೂಮಿ, ಕರ್ಮಭೂಮಿ ಮತ್ತು ನಿರ್ಯಾಣಭೂಮಿ.  ಹೀಗಾಗಿ ಮಹಾರಾಷ್ಟ್ರದಲ್ಲಿ ಅದೊಂದು ಭಕ್ತಿಪೀಠ ಎಂದೇ ಪ್ರಸಿದ್ಧಿ ಪಡೆಯಿತು.  ಏಕನಾಥನ ಸಮಾಧಿ ಮಂದಿರ ಇಂದಿಗೂ ಪೈಠಣಕ್ಕೆ ಸಹಸ್ರಾರು ಮಂದಿ ಭಕ್ತರನ್ನು ಆಕರ್ಷಿಸುತ್ತಿದೆ.  ಪ್ರತಿ ವರ್ಷ ಪಾಲ್ಗುಣ ಶುದ್ಧ ಷಷ್ಠಿಯಂದು ಏಕನಾಥ ಮಹಾರಾಜನ ಪುಣ್ಯತಿಥಿಯನ್ನು ಇಲ್ಲಿ ಆಚರಿಸಲಾಗುತ್ತದೆ.  

	ಏಕನಾಥ ಜ್ಞಾನೇಶ್ವರಿಯ ಶುದ್ಧ ಪಾಠವನ್ನು ತಯಾರಿಸಿದ್ದು (1584) ಇಲ್ಲಿಯೇ.
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ